ಗಾದೆ ಸುಳ್ಳಾಗುವುದಿಲ್ಲವೇ....?
ಗಾದೆಗಳು ಸುಳ್ಳಾಗುವುದಿಲ್ಲವೇ?.... ಬಹಳ ದಿನಗಳಿಂದ ಸಿಗದೇ ಇದ್ದ ಹೂವಿನ ಗಿಡದ ಬೀಜ ಇತ್ತೀಚೆಗೆ ಸಿಕ್ಕಿತು ಎಂದು ಹರ್ಷದಿಂದ ಮನೆಯ ಹೊರಗೆ ಇದ್ದ ಪಾಟ್ ನಲ್ಲಿ ನೆಟ್ಟು ,ದಿನವೂ ನೀರುಣಿಸಿ ನೋಡತೊಡಗಿದೆ.ಮೊಳಕೆಯೊಡೆಯಿತು,ಎಲೆ ಮೂಡಿ ಸಸಿಯಾಯಿತು.ಗಿಡ ದೊಡ್ಡದಾಯಿತು, ಹೂವು ಬಿಡಲೇಇಲ್ಲ.ಅದರ ಮೇಲೆ ಬಿಳಿ ಶಿಲೀಂದ್ರಗಳು ಬಂದು ಗಿಡ ಒಣಗಿ ಸತ್ತೇ ಹೋಯಿತು. ಬೇಸರವಾಯಿತು. ಪಾಪ,ಅದೂ ಒಂದು ಜೀವಿ,ಕಾಯಿಲೆ ಬಂದಾಗ ಎಷ್ಟು ಸಂಕಟ ಅನುಭವಿಸಿತೋ ಏನೋ .ಗಿಡ-ಮರಗಳಿಗೆ ಕಾಯಿಲೆ ಬಂದಾಗ,ಸಂಕಟವಾದಾಗ ಅವು ಯಾರಲ್ಲಿ ಹೇಳಿಕೊಳ್ಳಬೇಕು?-ಹೀಗೆ ಆಲೋಚಿಸುತ್ತಿದ್ದಾಗ ಎರಡು ಗಾದೆಗಳು ನೆನಪಾದವು.'ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ'. ' ಕಷ್ಟ ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತದೆಯೇ' ಈ ಎರಡೂ ಗಾದೆಗಳ ಆಳಕ್ಕೆ ಹೋಗಬೇಕೆನಿಸಿತು.ಮೊದಲಿಗೆ ,ವೇದ ಸುಳ್ಳಾದರೂ ....ಎಂಬ ಮಾತನ್ನೇ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ವೇದಗಳು ಅಪೌರುಷೇಯ.ದ್ರಷ್ಟಾರರಾದ ನಮ್ಮ ಋಷಿವರೇಣ್ಯರು ಅದನ್ನು ಗ್ರಹಿಸಿ ,ತಮ್ಮ ಶಿಷ್ಯರಿಗೆ ಬಾಯಿ ಪಾಠ ಮಾಡಿಸಿದರು.ಬಾಯಿಪಾಠ ಪದ್ಧತಿಯಲ್ಲಿ ಯೇ ಅದು ಸಾವಿರಾರು ವರ್ಷಗಳಿಂದ ಉಳಿದುಕೊಂಡು ಬಂದಿದೆ.ಮನುಕುಲದ ಒಳಿತಿಗಾಗಿ ವೇದಮಂತ್ರಗಳಲ್ಲಿ ಹಿತವಚನವಿದೆ.ಉದಾಹರಣೆಗೆ 'ವ್ರತವನ್ನು ಮಾಡು' ಎಂದು ವೇದವು ಹೇಳುತ್ತಿದೆ. ಇಲ್ಲಿ ವ್ರತ ಎಂದರೆ ತಂದೆ-ತಾಯಿ ಬದುಕಿಗೆ ಅಳವಡಿಸಿಕೊಂಡಿದ್ದ ಆದರ್ಶಗಳು. ...