ಗಾದೆ ಸುಳ್ಳಾಗುವುದಿಲ್ಲವೇ....?

ಗಾದೆಗಳು ಸುಳ್ಳಾಗುವುದಿಲ್ಲವೇ?....

ಬಹಳ ದಿನಗಳಿಂದ ಸಿಗದೇ ಇದ್ದ ಹೂವಿನ ಗಿಡದ ಬೀಜ ಇತ್ತೀಚೆಗೆ ಸಿಕ್ಕಿತು ಎಂದು ಹರ್ಷದಿಂದ ಮನೆಯ ಹೊರಗೆ ಇದ್ದ ಪಾಟ್ ನಲ್ಲಿ ನೆಟ್ಟು ,ದಿನವೂ ನೀರುಣಿಸಿ ನೋಡತೊಡಗಿದೆ.ಮೊಳಕೆಯೊಡೆಯಿತು,ಎಲೆ ಮೂಡಿ ಸಸಿಯಾಯಿತು.ಗಿಡ ದೊಡ್ಡದಾಯಿತು, ಹೂವು ಬಿಡಲೇಇಲ್ಲ.ಅದರ ಮೇಲೆ ಬಿಳಿ ಶಿಲೀಂದ್ರಗಳು ಬಂದು ಗಿಡ ಒಣಗಿ ಸತ್ತೇ ಹೋಯಿತು. ಬೇಸರವಾಯಿತು.
ಪಾಪ,ಅದೂ ಒಂದು ಜೀವಿ,ಕಾಯಿಲೆ ಬಂದಾಗ ಎಷ್ಟು ಸಂಕಟ ಅನುಭವಿಸಿತೋ ಏನೋ .ಗಿಡ-ಮರಗಳಿಗೆ ಕಾಯಿಲೆ ಬಂದಾಗ,ಸಂಕಟವಾದಾಗ ಅವು ಯಾರಲ್ಲಿ ಹೇಳಿಕೊಳ್ಳಬೇಕು?-ಹೀಗೆ ಆಲೋಚಿಸುತ್ತಿದ್ದಾಗ ಎರಡು ಗಾದೆಗಳು ನೆನಪಾದವು.'ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ'.   ' ಕಷ್ಟ  ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತದೆಯೇ' ಈ ಎರಡೂ ಗಾದೆಗಳ ಆಳಕ್ಕೆ ಹೋಗಬೇಕೆನಿಸಿತು.ಮೊದಲಿಗೆ ,ವೇದ ಸುಳ್ಳಾದರೂ ....ಎಂಬ ಮಾತನ್ನೇ ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ವೇದಗಳು ಅಪೌರುಷೇಯ.ದ್ರಷ್ಟಾರರಾದ ನಮ್ಮ ಋಷಿವರೇಣ್ಯರು ಅದನ್ನು ಗ್ರಹಿಸಿ ,ತಮ್ಮ ಶಿಷ್ಯರಿಗೆ ಬಾಯಿ ಪಾಠ ಮಾಡಿಸಿದರು.ಬಾಯಿಪಾಠ ಪದ್ಧತಿಯಲ್ಲಿ ಯೇ ಅದು ಸಾವಿರಾರು ವರ್ಷಗಳಿಂದ ಉಳಿದುಕೊಂಡು ಬಂದಿದೆ.ಮನುಕುಲದ ಒಳಿತಿಗಾಗಿ ವೇದಮಂತ್ರಗಳಲ್ಲಿ ಹಿತವಚನವಿದೆ.ಉದಾಹರಣೆಗೆ 'ವ್ರತವನ್ನು ಮಾಡು'  ಎಂದು ವೇದವು ಹೇಳುತ್ತಿದೆ. ಇಲ್ಲಿ ವ್ರತ ಎಂದರೆ  ತಂದೆ-ತಾಯಿ ಬದುಕಿಗೆ ಅಳವಡಿಸಿಕೊಂಡಿದ್ದ ಆದರ್ಶಗಳು. ಈ ಆದರ್ಶಗಳನ್ನು ಬಿಡದೆ ಪಾಲಿಸಿ ಎಂಬುದು ಮಕ್ಕಳಿಗೆ ಸೂಚನೆ. ಇಂತಹ ಸಾವಿರಾರು ಹಿತವಚನಗಳು ವೇದ ಮಂತ್ರಗಳಲ್ಲಿವೆ.ವಾಸ್ತವಾಂಶ ಹೀಗಿರುವಾಗ ಸುಳ್ಳು ಹೇಳಬೇಕಾದ ಅಗತ್ಯ ವೇದಕ್ಕೆ ಎಲ್ಲಿದೆ...? ಸುಳ್ಳು ಹೇಳುವುದರಿಂದ  ವೇದನಿಷ್ಠರಿಗೆ ಆಗುವ ಲಾಭವಾದರೂ ಏನು..? ವೇದಗಳಲ್ಲಿ ಏನಿದೆ ಎಂದು ತಿಳಿಯುವ ಯಾವುದೇ ಪ್ರಯತ್ನವನ್ನೂ ಮಾಡದೆ ಸುಳ್ಳಾಗುವಂತಹ ಅಂಶ ವೇದಗಳಲ್ಲಿ ಇದೆ ಎಂದು ಆತುರದ ತೀರ್ಮಾನಕ್ಕೆ ಬಂದಿರುವುದು ಹಾಸ್ಯಾಸ್ಪದ ವೆನಿಸುತ್ತದೆ.ಇದು ಅತಿರೇಕದ ಅಭಿಮಾನದಿಂದ ಸೃಷ್ಟಿ ಸಿದ ಗಾದೆ ಎಂದು ಮಾತ್ರ ಹೇಳಬಹುದು. ಇಷ್ಟಕ್ಕೂ ಗಾದೆಗಳು ಸುಳ್ಳಾಗಿಯೇ ಇಲ್ಲವೇ...?  'ಸಾವಿರ ಸುಳ್ಳು ಹೇಳಿಯಾದರೂ  ಒಂದು ಮದುವೆ ಮಾಡು '  ಎಂಬುದು ನೀತಿ ಬೋಧಕವೋ ,ಅನೀತಿ ಬೋಧಕವೋ...?ಸುಳ್ಳು ಹೇಳಿ ಮಾಡಿದ ಮದುವೆ ಎಷ್ಟು ಕಾಲ ಉಳಿದೀತು..? ಆದ್ದರಿಂದ ಜನಪ್ರಿಯವಾದುದೆಲ್ಲ ಸತ್ಯವಲ್ಲ.ಸತ್ಯವಾದುದು ಜನಪ್ರಿಯವಾಗುವ ಸಂಭವ ಬಹಳ ಕಡಿಮೆ. ಇನ್ನೊಂದು ಗಾದೆ ವಿಚಾರಕ್ಕೆ ಬರೋಣ.'ಕಷ್ಟಗಳು ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತದೆಯೇ'-ಆಗಲೇ ತಿಳಿಸಿದಂತೆ ನಾನು ಕಂಡಂತೆಯೇ ಗಿಡವು ಕಷ್ಟ ಅನುಭವಿಸಿ ಸತ್ತು ಹೋಯಿತು. ರಸ್ತೆ ಅಗಲೀಕರಣ ಮಾಡಿದಾಗಲೆಲ್ಲ ಮರಗಳ ಹತ್ಯೆಯಾಗುತ್ತದೆ.ಹಿಂದಿನಿಂದಲೂ ಸ್ವಾರ್ಥೀ ಮಾನವನ ಉಪಯೋಗಕ್ಕಾಗಿ ಮರಗಳ ಹತ್ಯೆಯಾಗಿದೆ.ಈಗ ಹೇಳಿ,ಮರಗಳಿಗೆ ಕಷ್ಟ ಇಲ್ಲವೇ ...?
ರೂಢಿ ಮಾತಿಗೆ ಬಂದು ಗಾದೆಗಳು ಜನಪ್ರಿಯ ವಾದವು.ರೂಢಿಮಾತಿಗೆ ಬಾರದೆ ನಮ್ಮ ಹೆಮ್ಮೆಯ ವೇದೋಕ್ತಿಗಳು ತೆರೆಮರೆಯಲ್ಲಿ ಉಳಿದವು.ಅಜ್ಞಾನಿಗಳು ವೇದಗಳ ಬಗೆಗೆ ಧಾರಾಳವಾಗಿ ಆರೋಪಗಳನ್ನು ಮಾಡಿದರು. 
ಯಾರು ಏನಾದರೂ ಹೇಳಲಿ,ವೇದಮಾತೆಯ ಪೂಜನೀಯತೆಯನ್ನು ಯಾರೂ ತಗ್ಗಿಸಲು ಸಾಧ್ಯವಿಲ್ಲ. ಗಾದೆ ಜನಸಾಮಾನ್ಯರ ಮಾತುಗಳಿಗೆ ಪುಷ್ಟಿ ಕೊಡುತ್ತದೆ. ಹಾಗೆಂದು ಪ್ರಕ್ಷಿಪ್ತ ಗಾದೆಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ವೇದ ಮಂತ್ರಗಳಲ್ಲಿ ಪ್ರಕ್ಷಿಪ್ತಗಳಿಗೆ ಅವಕಾಶವಿಲ್ಲ.ಅವುಗಳ ರಚನಾ ಕ್ರಮವೇ ಅಷ್ಟು ಸುರಕ್ಷಿತವೂ ಸುಭದ್ರವೂ ಆಗಿದೆ.

ವೇದಗಳ ಕ್ಷೇತ್ರ ವ್ಯಾಪ್ತಿಯೇ ಬೇರೆ.ಗಾದೆಗಳ ಕ್ಷೇತ್ರ ವ್ಯಾಪ್ತಿಯೇ ಬೇರೆ.ಉತ್ಕೃಷ್ಟತೆ ಎಂಬುದು ತನ್ನ ಪಾಡಿಗೆ ತಾನು ಎಲ್ಲಿರಬೇಕೋ ಅಲ್ಲಿರುತ್ತದೆ.ಹೋಲಿಕೆ ಸಲ್ಲದು.
ಸುಂದರ ಬದುಕಿಗೆ ವೇದವೂ ಬೇಕು,ಗಾದೆಯೂ ಬೇಕು.ವೇದಮಾರ್ಗದಲ್ಲಿ, ನೈತಿಕ ಮೌಲ್ಯಗಳ ತಳಹದಿಯುಳ್ಳ ಗಾದೆಗಳ ತಂಗಾಳಿಯಲ್ಲಿ ನಮ್ಮ ಬದುಕಿನ ಪಯಣ ಸಾಗಲಿ,ಗುರಿ ಸೇರಲಿ.

                                              -ಅ.ನಾ.ರಾ.

Comments