ನಾನು..........
ನನಗೆ ತಿಳಿಯದ ನಾನು
ನಾವು ಕಾಣುತ್ತಿರುವ ಈ ಜಗತ್ತು ಎರಡು ಬಗೆಯದಾಗಿದೆ.ಅದರಲ್ಲಿ ಒಂದು ವಸ್ತುನಿಷ್ಠ ಜಗತ್ತು, ಇನ್ನೊಂದು ಪಾರಮಾರ್ಥಿಕ ಜಗತ್ತು.
ವಸ್ತುನಿಷ್ಠ ಜಗತ್ತು ಅಸೀಮ ಆಸೆ-ಆಕಾಂಕ್ಷೆಗಳಿಂದ ತುಂಬಿ ಹೋಗಿದೆ. ಇದು ಕ್ಷಣ-ಕ್ಷಣಕ್ಕೂ ಬದಲಾಗುವ ಸ್ವಭಾವಹೊಂದಿದೆ. ಆದರೆ ಪಾರಮಾರ್ಥಿಕ ಜಗತ್ತು ಅಚಲವಾಗಿದೆ. ಅಚಲವಾಗಿರುವುದರಿಂದಲೇ ಅದು ಪರಮಾರ್ಥವಾಗಿದೆ.
ವಸ್ತುನಿಷ್ಠ ಜಗತ್ತಿನಲ್ಲಿ ನಾನು ಎಂಬುದೇ ಪ್ರಧಾನವಾಗಿದೆ. ಪಾರಮಾರ್ಥಿಕ ಜಗತ್ತಿನಲ್ಲಿ ಶ್ರೀ ಭಗವಂತನ ಹೊರತಾಗಿ ಬೇರೇನೂ ಇಲ್ಲ.ಎಲ್ಲ ತಾತ್ವಿಕ ಕಲ್ಪನೆಗಳೂ ಭಗವಂತನನ್ನೇ ಪರಿಭ್ರಮಣ ಮಾಡುತ್ತವೆ.
ಈಗ ನೀವು ಹೇಳಿ, ನಾನು ಯಾರು........ ?
'ನಾನು ಇಂತಹ ಹೆಸರಿನವನು.....'
ನೀವು ನಿಮ್ಮ ಹೆಸರನ್ನು ಹೇಳುತ್ತಿದ್ದೀರಿ, ನಾನು ಎಂಬುದು ಪ್ರತ್ಯೇಕವಾಗಿಯೇ ಉಳಿಯಿತು.....
'ನಾನು ಇಂತಹವರ ಮಗ.....'
ನೀವು ಆ ಹೆಸರಿನ ವ್ಯಕ್ತಿ ಯೊಂದಿಗಿನ ನಿಮ್ಮ ಸಂಬಂಧವನ್ನು ಹೇಳುತ್ತಿದ್ದೀರಿ,ನಾನು ಬೇರೆಯಾಗಿಯೇ ಉಳಿಯಿತು....
'ನಾನು ಇಂತಹ ವೃತ್ತಿಯ ಇಂತಹ ಹೆಸರಿನವನು....'
ನೀವು ನಿಮ್ಮ ಹೆಸರಿಗೆ ವೃತ್ತಿಯನ್ನು ಅಂಟಿಸುತ್ತಿದ್ದೀರಿ,ಅದು ನಾನಾರು ಎಂಬುದಕ್ಕೆ ಉತ್ತರ ವಲ್ಲ....
ಹಾಗಾದರೆ, ನಿಜಕ್ಕೂ ನಾನು ಯಾರು...ಅದನ್ನಾದರೂ ಹೇಳಿ...
ನೀವು ಎಲ್ಲಿಗೆ ಬರಬೇಕಿತ್ತೋ ಅಲ್ಲಿಗೆ ಈಗ ಬಂದಿರಿ...ಆತ್ಮವೇ ನಿಮ್ಮ ನಿಜ ಸ್ವರೂಪ.... ಅದು ದೇಹದಲ್ಲಿ ಅಂತರ್ಗತವಾಗಿರುವುದರಿಂದಾಗಿ ನೀವು ಜೀವಾತ್ಮ..ಜೀವಾತ್ಮಧಾರಿ ದೇಹವಾಗಿ ನೀವು ಪಾಪ-ಪುಣ್ಯ ಕರ್ಮಗಳನ್ನು ಮಾಡುತ್ತಿರುವುದರಿಂದ ಮತ್ತೆ ಜನನ,ಮತ್ತೆ ಮರಣ.ಫಲಾಪೇಕ್ಷೆಯಿಂದ ಕಾಮ್ಯಕರ್ಮಗಳನ್ನು ಮಾಡಿದಾಗ ಪುಣ್ಯಫಲಗಳನ್ನು ಅನುಭವಿಸಲು ಮತ್ತೆ ಹುಟ್ಟಿಬರಲೇಬೇಕು,ಆಗ ತಪ್ಪುಮಾಡಿದರೆ ಪಾಪಫಲಗಳನ್ನು ಅನುಭವಿಸಲು ಮತ್ತೆ ಹುಟ್ಟಬೇಕು.ಪುನರಪಿ ಜನನಂ,ಪುನರಪಿ ಮರಣಂ.....ಈ ಭವಚಕ್ರ ದಿಂದ ಪಾರಾಗಬೇಕಲ್ಲ ಎಂಬ ಆಲೋಚನೆ ನಿಮ್ಮ ಮನಸ್ಸಿಗೆ ಬರಬೇಕು.ಅದಕ್ಕಾಗಿ ನೀವು ಆಧ್ಯಾತ್ಮಿಕ ಪ್ರಯತ್ನ ಗಳನ್ನು ಮಾಡಬೇಕು.ಮೊದಲು ಅರಿಷಡ್ವರ್ಗಗಳಾದ ಕಾಮ,ಕ್ರೋಧ,ಲೋಭ,ಮೋಹ,ಮದ,ಮಾತ್ಸರ್ಯಗಳನ್ನು ತ್ಯಾಗ ಮಾಡಬೇಕು.ಇದು ಛಲದಿಂದಲೇ ಸಾಧ್ಯ.ಅರಿಷಡ್ವರ್ಗ ತ್ಯಾಗ ಮಾಡದಿದ್ದರೆ ನಾವು ಮಾಡುವ ಆಚರಣೆಗಳೆಲ್ಲವೂ ವ್ಯರ್ಥ.ಅದಕ್ಕಾಗಿಯೇ ಅಲ್ಲವೇ ದಾಸರು' ಮನವ ಶೋಧಿಸಬೇಕು ನಿಚ್ಚ...' ಎಂದು ಹೇಳಿರುವುದು... ನಾನು ಎಂಬುದು ರಕ್ತ-ಮಾಂಸದ ದೇಹವಲ್ಲ.ಅದು ಜೀವಾತ್ಮದಿಂದ ಚೈತನ್ಯ ಪಡೆದ ವ್ಯಕ್ತಿ ತ್ವವೇ ಆಗಿದೆ.ನನ್ನ ದೇಹ ಸ್ಥಿತಿ -ಎಂದು ನೀವು ಹೇಳುವಾಗ ನನ್ನ ಎಂಬುದರ ಮೂಲವಾದ 'ನಾನು' ದೇಹಕ್ಕಿಂತ ಬೇರೆ ಎಂಬುದನ್ನು ನೀವು ಪರೋಕ್ಷವಾಗಿ ಒಪ್ಪಿಕೊಂಡಿರುತ್ತೀರಿ.ನಮ್ಮ ಆಂತರ್ಯವು ಸತ್ಯವನ್ನೇ ಹೊರಹಾಕುತ್ತದೆ.ಬುದ್ಧಿಯು ಅದನ್ನು ಮರೆಮಾಚುತ್ತದೆ.ಆದ್ದರಿಂದಲೇ ಸಾಧು-ಸಂತರು ಬುದ್ಧಿ,ಮನಸ್ಸುಗಳನ್ನು ಕಟ್ಟಿಹಾಕಿ,ಆಂತರ್ಯದ ಕರೆಗೆ ಓಗೊಡುತ್ತಾರೆ.
ನಾನಾರು ಎಂಬುದಕ್ಕೆ ನಾನು ದೇಹಾತೀತ ಅಸ್ತಿತ್ವ ಎಂಬುದೇ ಉತ್ತರ. ನಾವು ನಮ್ಮ ಕರ್ಮಗಳಿಂದಲೇ ನಮ್ಮ ದೇಹಾತೀತ ಅಸ್ತಿತ್ವ ವನ್ನು ಪ್ರಬಲಗೊಳಿಸುತ್ತೇವೆ ಅಥವಾ ದುರ್ಬಲಗೊಳಿಸುತ್ತೇವೆ.ನಮ್ಮ ದೇಹ ನಾಶವಾದರೂ ನಮ್ಮ ದೇಹಾತೀತ ಅಸ್ತಿತ್ವವಾದ ವ್ಯಕ್ತಿ ತ್ತ್ವವು ತನ್ನ ಪ್ರಬಲತೆ ಅಥವಾ ದುರ್ಬಲತೆಯಿಂದ ದೀರ್ಘಕಾಲ ಅಥವಾ ಕಡಿಮೆ ಕಾಲ ಉಳಿಯುತ್ತದೆ. ನಂತರ ಅದು ಭವಚಕ್ರವನ್ನು ಸೇರುತ್ತದೆ.
ವ್ಯಕ್ತಿ ತ್ವದಲ್ಲಿ ಎರಡು ವಿಧ.ಒಂದು ಅಸಲಿ ವ್ಯಕ್ತಿ ತ್ವ,ಮತ್ತೊಂದು ನಕಲಿ ವ್ಯಕ್ತಿತ್ವ.ನೇರ ನಡೆ-ನುಡಿಯವರದು ಅಸಲಿ ವ್ಯಕ್ತಿ ತ್ವ.ಇವರಿಗೆ ಮಿತ್ರರು,ಬಂಧುಗಳು,ಹಿತೈಷಿಗಳು ಕಡಿಮೆ.ಇವರಾಡುವ ಸತ್ಯವೆಂಬ ಕಹಿ ಔಷಧಿ ಎಷ್ಟು ಮಂದಿಗೆ ಬೇಕು..?ಅದಕ್ಕೆ ಅಲ್ಲವೇ ಅಲ್ಲವೆ 'ಖಂಡಿತವಾದಿ ಲೋಕ ವಿರೋಧಿ ' ಎಂಬ ಗಾದೆ ಇರುವುದು.... ನಕಲಿ ವ್ಯಕ್ತಿ ತ್ವದವರಿಗೆ ಜನರನ್ನು ಮರುಳು ಮಾಡುವ ಕಲೆ ಗೊತ್ತು, ಅದರಿಂದ ಅವರಿಗೆ ಅಪಾರ ಬೆಂಬಲ.ಇದೇನಾದರೂ ಇರಲಿ,ಸತ್ವ್ತಗುಣ ಸಂಪನ್ನರ ವ್ಯಕ್ತಿ ತ್ವವೇ ಪ್ರಬಲವಾದುದು.ಇವರ ವ್ಯಕ್ತಿ ತ್ವ ನೂರಾರಲ್ಲ,ಸಾವಿರಾರು ವರ್ಷವಾದರೂ ಉಳಿದಿರುತ್ತದೆ. ಇವರೇ ಭಗವಂತನಿಗೆ ಪ್ರಿಯವಾದ ವರು.
ಮಹಾ ಪುರುಷರು,ಅಪ್ರತಿಮ ವೀರರು,ಕವಿ,ಕಲಾವಿದರು, ತತ್ವ್ತಜ್ಞಾನಿಗಳು ಮೊದಲಾದವರು ಇನ್ನೂ ನಮ್ಮ ಮನದಂಗಳದಲ್ಲಿ ಬದುಕಿದ್ದಾರಲ್ಲವೇ ...ಇದು ಸಾರ್ಥಕ ವಾದ ಬದುಕು.ದೇಹದಿಂದ ಬದುಕುವುದು ಪ್ರಾಣಿಗಳಿಗೂ ಸಾಧ್ಯ.ನಮ್ಮ ವಿವೇಕವನ್ನು ಜಾಗೃತಗೊಳಿಸಿದರೆ ನಾವು ಸ್ಮರಣೀಯ ವ್ಯಕ್ತಿ ತ್ವದಿಂದ ಬದುಕುವುದು ಸಾಧ್ಯ.
ಸೃಜನಶೀಲತೆ ಸಜ್ಜನಿಕೆ,ಸತ್ಕಾರ್ಯ,ಸಹಾನುಭೂತಿ, ದಾನ,ದಯೆ, ಪರೋಪಕಾರ, ಮಾನವೀಯತೆ-ಇಂತಹ ಸದ್ಗುಣಗಳಿಂದ ನಮ್ಮ ವ್ಯಕ್ತಿ ತ್ವ ತಾನಾಗಿಯೇ ಉಳಿಯಬೇಕು.ಉಳಿದು ಬೆಳಗಬೇಕು.ಜಿಪುಣರು ಮತ್ತು ಸ್ವಾರ್ಥಿಗಳ ವ್ಯಕ್ತಿತ್ವ ಅವರ ಸಾವಿನೊಂದಿಗೇ ಸಾಯುವುದು. ಔದಾರ್ಯಸಂಪನ್ನರ ವ್ಯಕ್ತಿ ತ್ವವು ಜೀವಾತ್ಮದ ಚೈತನ್ಯ. ಇಂತಹ ಚೈತನ್ಯ ಶಕ್ತಿ ಯಿಂದ ನಮ್ಮ ವ್ಯಕ್ತಿ ತ್ವವು ಪ್ರಭಾವ ಶಾಲಿಯಾಗಿ ದೀರ್ಘಕಾಲ ಉಳಿಯುತ್ತದೆ. ಇಂತಹ ವ್ಯಕ್ತಿ ತ್ವ ದ 'ನಾನು' ಉನ್ನತವಾದುದು.ಇದಕ್ಕಾಗಿ ಸದಾ ಸದ್ಗುಣ ವಂತರಾಗೋಣ.ತ್ಯಾಗವೆಂಬ ಠೇವಣಿ ಹೊಂದಿ ಶ್ರೀಮಂತರಾಗೋಣ.
- ಅ.ನಾ.ರಾ.
Comments
Post a Comment